ನಸ್ಖ್ -
ಪ್ರಾಚೀನ ಅರಬ್ಬೀ ಬರೆವಣಿಗೆಯ ಎರಡು ಪದ್ಧತಿಗಳಲ್ಲಿ ಒಂದು. ಇನ್ನೊಂದು ಕೂಫೀ. ಈ ಶೈಲಿ ಕೂಫೀ ಶೈಲಿಯಿಂದಲೇ ವಿಕಾಸಗೊಂಡದ್ದೆಂದು ಸಾಮಾನ್ಯವಾಗಿ ನಂಬಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆಗಳು ಅರಬ್ಬೀ ಲಿಪಿ ಕ್ರಿ.ಶ. ಸು. 4-5ನೆಯ ಶತಮಾನದಲ್ಲಿ ಬಳಕೆಗೆ ಬಂದಾಗಿನಿಂದ ಈ ಎರಡು ಶೈಲಿಗಳು ಜೊತೆಜೊತೆಯಾಗಿಯೇ ಬೆಳೆದುಕೊಂಡು ಬಂದಿವೆಯೆಂಬುದನ್ನು ಸ್ಪಷ್ಟಪಡಿಸಿವೆ. ಕಟ್ಟಡಗಳಲ್ಲಿ ಕಂಡರಣೆ ಮಾಡುವಾಗ ಕೂಫೀ ಶೈಲಿಯನ್ನೂ ಪುಸ್ತಕಗಳನ್ನು ನಕಲು ಮಾಡುವಾಗ ನಸ್ಖ್ ಶೈಲಿಯನ್ನು ಬಳಸಲಾಗಿದೆ. ವಿಶೇಷತಃ ಕೋನಾಕೃತಿಯ ರೂಹಣವನ್ನುಳ್ಳ ಕೂಫೀಯಿಂದ ಲಂಬಲಂಬಾಕೃತಿಯ ಕಿಂಚಿತ್ ಬಾಗಿದ ಆಕಾರಗಳನ್ನುಳ್ಳ ನಸ್ಖ್ ಅದರಿಂದ ಭಿನ್ನವಾಗಿ ನಿಲ್ಲುತ್ತದೆ. ಅಲ್ಲದೆ ನಸ್ಖ್ ಶೈಲಿ ನಸ್ತಲೀಖ್ ಶೈಲಿಯಂತೆ ಪೂರ್ಣ ವರ್ತುಲ ಅಥವಾ ಅಂಡಾಕೃತಿಯದೂ ಅಲ್ಲ. ಎಂದರೆ ಅದು ಕೂಫೀ ಹಾಗೂ ನಸ್ತಲೀಖ್‍ಗಳ ಮಧ್ಯ ಸ್ವರೂಪದ್ದು. ಅದು ಬೇರೆ ಬೇರೆ ದೇಶಗಳಲ್ಲಿ ಭಿನ್ನ ಭಿನ್ನ ಹೆಸರುಗಳನ್ನು ಪಡೆದಿದೆ. ಉದಾಹರಣೆಗೆ ಉತ್ತರ ಆಫ್ರಿಕದಲ್ಲಿ ಮರ್ಛರಿಬಿ ಅಥವಾ ಖೈರ್‍ವಾನೀ, ಫೆಜ್‍ದಲ್ಲಿ ಫಾಸೀ ಮತ್ತು ಸ್ಪೇನಿನಲ್ಲಿ ಅಂದಲೂಸೀ ಎಂದು ಅದನ್ನು ಕರೆಯುತ್ತಾರೆ.

ಖ್ಯಾತ ಲಿಪಿಕಾರ ಅಬೂ ಅಲೀ ಇಬ್ನಮುಖ್ಲ (885-939) ನಸ್ಖ್ ಶೈಲಿಗೆ ಅದರ ಅಂತಿಮ ರೂಪವನ್ನು ಕೊಟ್ಟ.
ಇಬ್ನ್‍ಮುಖ್ಲನಿಂದ ನಸ್ಖ್ ಶೈಲಿಯನ್ನು ರೂಢಿಸಿಕೊಂಡವರಲ್ಲಿ ಆತನ ಸೋದರ ಅಬೂ ಅಬ್ದುಲ್ಲಾಹ್ ಹಸನ್, ಮುಹಮ್ಮದ್ ಬಿನ್ ಇಸ್ಜಾಈಲ್ ಬಿಘದಾದೀ, ಇಸ್ಮಾಈಲ್ ಬಿನ್ ಹಮ್ಮಾದ್ ಚೌಹಾರೀ ಮತ್ತು ಹಸನ್ ಬಿನ್ ಅಬ್ದುಲ್ಲಾಹ್ ಇವರು ಪ್ರಮುಖರು. ಅನಂತರ ಪ್ರತಿಭಾವಂತ ಲಿಪಿಕಾರನೆಂದರೆ ಹಿಲಾಲ್ ಇಬ್ನಬವ್ವಾಬನ (1025) ಮಗ ಅಲೀ. ಜಮಾಲುದ್ದೀನ್ ಯಾಖುತ್ (1298) ಇವರಲ್ಲೆಲ್ಲ ಅತಿ ಶ್ರೇಷ್ಠ ಲಿಪಿಕಾರನೆನ್ನಲಾಗಿದೆ. ಆತನ ಆರು ಮಂದಿ ಶಿಷ್ಯರೂ ಈ ದಿಶೆಯಲ್ಲಿ ಅನಂತಕೀರ್ತಿಯನ್ನು ಪಡೆದಿದ್ದಾರೆ.

ಭಾರತದಲ್ಲಿ ಬಳಕೆಯಲ್ಲಿದ್ದ ನಸ್ಖ್ ಶೈಲಿಯ ಬಗ್ಗೆ ಹೇಳಲು ನಮಗೆ ಉಪಲಬ್ಧವಾಗಿರುವ ಸಾಮಗ್ರಿ ಬಹಳ ಅಲ್ಪ. ಹುಮಾಯೂನ್ ದೊರೆಯ ಕಾಲದಲ್ಲಿ ನಸ್ಖ್‍ಗಿಂತ ನಸ್ತಲೀಖ್ ಶೈಲಿಗೇ ಹೆಚ್ಚು ಪ್ರಾಮುಖ್ಯವಿತ್ತು. ಪಾರಸಿ ಹಾಗೂ ಉರ್ದು ಬರೆವಣಿಗೆಯಲ್ಲಿ ಹೆಮ್ಮೆಯ ಸ್ಥಾನವನ್ನು ನಸ್ತಲೀಖ್ ಆಕ್ರಮಿಸಿದರೂ ಅರಬ್ಬಿ ಹಸ್ತಪ್ರತಿಗಳನ್ನು ನಕಲು ಮಾಡುವಲ್ಲಿ ಮತ್ತು ಶಾಸನಗಳನ್ನು ಬರೆಯುವಲ್ಲಿ ನಸ್ಖ್ ಪದ್ಧತಿಯನ್ನು ಇಂದಿಗೂ ಬಳಸಲಾಗುತ್ತಿದೆ. ಖ್ವಾಜಾ ಸುಲ್ತಾನ್ ಅಲೀ, ಅಬ್ದುಸ್ ಸಮದ್ ಷೀರೀನ್‍ರಖ್ಮ್ ಮುಂತಾದ ಪ್ರವೀಣ ಲಿಪಿಕಾರರು ನಸ್ಖ್ ಶೈಲಿಯಲ್ಲಿ ಬರೆದ ಕುರಾನ್ ಮತ್ತು ಇತರ ಧಾರ್ಮಿಕ ಗ್ರಂಥಗಳ ಪ್ರತಿಗಳು, ವಸ್óಲೀಗಳು (ಕಾರ್ಪಾಸ ಕಾಗದ ಸುರುಳಿಗಳು) ಉಳಿದು ಬಂದಿವೆ. 		
	(ಜûಡ್.ಎ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ